ನವದೆಹಲಿ: ಕಲಾಪಕ್ಕೆ ಅಡ್ಡಿಪಡಿಸಿದರೆಂಬ ಕಾರಣಕ್ಕೆ ಲೋಕಸಭೆ ಮತ್ತು ರಾಜ್ಯಸಭೆಯಿಂದ ವಿರೋಧ ಪಕ್ಷಗಳ 146 ಸದಸ್ಯರ ಅಮಾನತು ಖಂಡಿಸಿ ಇಂಡಿಯಾ ಬಣದ ನಾಯಕರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.
ಇದಲ್ಲದೆ, ಎಲ್ಲ ರಾಜ್ಯಗಳ ಜಿಲ್ಲಾ ಕೆಂದ್ರಗಳಲ್ಲೂ ಇಂಡಿಯಾ ಬಣದ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.
ನಾವು ಸಂಸತ್ತು, ಸಂಸದೀಯ ಮತ್ತು ಸಂವಿಧಾನದ ಘನತೆ ಉಳಿಸಲು ಹೋರಾಟ ನಡೆಸುತ್ತಿದ್ದೇವೆ ಎಂದು ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಸಂಸತ್ತಿನಲ್ಲಿ ಪ್ರಶ್ನೆ ಎತ್ತಲು ಅವಕಾಶ ಸಿಗದಿದ್ದರೆ ನಾವು ಎಲ್ಲಿಗೆ ಹೋಗಬೇಕು ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
'ಸಂಸತ್ ಸದಸ್ಯರನ್ನು ಸಾಮೂಹಿಕವಾಗಿ ಅಮಾನತು ಮಾಡಲಾಗಿದೆ. 5 ಅಥವಾ 6 ಮಂದಿ ಆಗಿದ್ದರೆ ಪರವಾಗಿಲ್ಲ, ಆದರೆ, ಸುಮಾರು 150 ಸದಸ್ಯರನ್ನು ಅಮಾನತುಗೊಳಿಸುವುದು ಪ್ರಜಾಪ್ರಭುತ್ವವಲ್ಲ. ಈ ಸಂದೇಶವು ಜನರಿಗೆ ತಲುಪಬೇಕು... ವಿಪಕ್ಷಗಳ ಎಲ್ಲಾ ಸಂಸದರು ಹೊರಗಿದ್ದರೆ ಸಂಸತ್ತು ಹೇಗೆ ಕಾರ್ಯನಿರ್ವಹಿಸುತ್ತದೆ?... ಸಂಸದರಿಂದ ಅಂತಹ ಯಾವುದೇ ಉಲ್ಲಂಘನೆಯಾಗಿಲ್ಲ. ಸಂಸದರು ತಮ್ಮ ವಿಚಾರವನ್ನು ಮುಂದಿಡಲು ಹಕ್ಕು ಹೊಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮೊಹಮ್ಮದ್ ಅಜರುದ್ದೀನ್ ಹೇಳಿದ್ದಾರೆ.

